Friday 23 March 2018

ಕ್ಯಾಂಪಸ್‌ ಸಂದರ್ಶನ : ನಿಮ್ಮಿಂದ ಬಯಸುವುದೇನು?

ಕ್ಯಾಂಪಸ್‌ ಸಂದರ್ಶನ : ನಿಮ್ಮಿಂದ ಬಯಸುವುದೇನು?
  

ಉದ್ಯೋಗ ಮೇಳ, ಕ್ಯಾಂಪಸ್‌ ನೇಮಕಾತಿಯಲ್ಲಿ ಕಂಪೆನಿಗಳು ನಿಮ್ಮಿಂದ ಬಯಸುವುದು ಮಹತ್ವದ ಸಾಧನೆಯನ್ನಲ್ಲ; ಬದಲಾಗಿ ಅಂಥದೊಂದು ಸಾಧನೆಗೆ ಸಿದ್ಧಗೊಳ್ಳುತ್ತಿರುವ ನಿಮ್ಮ ಮನಸ್ಸನ್ನು ಮತ್ತು ಮನಃಸ್ಥಿತಿಯನ್ನು. ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಬಂಧಿಸಿಕೊಳ್ಳಬೇಡಿ, ಮುಕ್ತವಾಗಿ ಯೋಚಿಸಿ.

ಸುರಭಿ ಇತ್ತೀಚೆಗಷ್ಟೇ ಕ್ಯಾಂಪಸ್‌ ನೇಮಕಾತಿ (ರಿಕ್ರೂಟ್‌ಮೆಂಟ್‌)ಗೆ ಸಂಬಂಧಿಸಿದ ಸಂದರ್ಶನದಲ್ಲಿ ಭಾಗವಹಿಸಿದ್ದಳು. ಹೋಗುವಾಗ ಬಹಳ ಉತ್ಸಾಹದಿಂದಲೇ ಇದ್ದವಳು ಮನೆಗೆ ಬರುವಾಗ ಯಾಕೋ ಮಂಕಾಗಿದ್ದಳು. ಮನೆಯಲ್ಲಿ ಏನೆಂದು ಕಾರಣ ಕೇಳಿದರೆ, 'ಯಾಕೋ ಸರಿಯಾಗಿ ಮಾಡಲಿಲ್ಲ' ಎಂದಳು. ಅವಳಪ್ಪ ಮ್ಯಾನೇಜ್‌ ಮೆಂಟ್‌ ಹುದ್ದೆಯಲ್ಲಿದ್ದವರು. ಮಗಳ ಬೇಸರವನ್ನು ಕಂಡು ಧೈರ್ಯ ತುಂಬಿದರು. ಮುಂದಿನ ತಿಂಗಳು ನಡೆಯುವ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಮುನ್ನ ಮಗಳನ್ನು ಸಿದ್ಧಗೊಳಿಸಬೇಕೆಂದು ನಿರ್ಧರಿಸಿದರು. ಅದರಂತೆ ಎಲ್ಲವೂ ನಡೆದರೂ ಸುರಭಿ ಪಂದ್ಯದಲ್ಲಿ ಸೋತಳು.

ಅಪ್ಪನ ತರಬೇತಿ ನಡುವೆಯೂ ಸುರಭಿ ಏನು ತಪ್ಪು ಮಾಡಿದಳು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಅವಳಿಗೂ ಸಹ. ಶೈಕ್ಷಣಿಕಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರಗಳನ್ನು ಕೊಟ್ಟಿದ್ದಳು. ಧನಾತ್ಮಕ ದೃಷ್ಟಿಕೋನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ಆಶಾವಾದಿಯಾಗಿಯೇ ಉತ್ತರಿಸಿದ್ದಳು. ಆದರೂ ಎಡವಿದ್ದೆಲ್ಲಿ? ಎಂಬುದಕ್ಕೆ ಉತ್ತರ ದೊರಕಿರಲಿಲ್ಲ.

ಕ್ಯಾಂಪಸ್‌ ನೇಮಕಾತಿ
ವಿದ್ಯಾರ್ಥಿಗಳು ಕೋರ್ಸ್‌ ಪೂರ್ಣಗೊಳಿಸಿದ ಸಂದರ್ಭದಲ್ಲಿ ಹಲವು ಕಾಲೇಜುಗಳು ತಮ್ಮಲ್ಲೇ ಪ್ರತಿಷ್ಠಿತ ಕಂಪೆನಿಗಳನ್ನು ಕರೆದು ಕ್ಯಾಂಪಸ್‌ ಸಂದರ್ಶನಕ್ಕೆ ಅಣಿಗೊಳಿಸುತ್ತವೆ. ಅದೇ ಈಗ ಉದ್ಯೋಗ ಮೇಳದ ರೂಪವೂ ಪಡೆಯುತ್ತಿದೆ. ಪ್ರತಿಷ್ಠಿತ ಕಂಪೆನಿಗಳು ತಮ್ಮ ಅಗತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಂದರ್ಶಿಸಿ ಸೂಕ್ತವೆನಿಸಿದವರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತವೆ. ಇಡೀ ಪ್ರಕ್ರಿಯೆಯಲ್ಲಿ ಗಮನಿಸುವುದು ಬರೀ ಶೈಕ್ಷಣಿಕ ಸಾಧನೆಯನ್ನಲ್ಲ; ಇನ್ನೂ ಹಲವಾರು ಸಂಗತಿಗಳು.

ಕಂಪೆನಿಯೊಂದರ ಮಾನವ ಸಂಪನ್ಮೂಲ ಅಧಿಕಾರಿಯೊಬ್ಬರು, ಸಾಮಾನ್ಯವಾಗಿ ಈಗತಾನೇ ಕೋರ್ಸ್‌ ಮುಗಿಸಿ ಬರುವ ವಿದ್ಯಾರ್ಥಿಯಿಂದ ಏನನ್ನು ಬಯಸುತ್ತೀರಿ? ಎಂದು ಕೇಳಿದ ಪ್ರಶ್ನೆಗೆ, 'ನಮಗೆ ಅವರ ಶೈಕ್ಷಣಿಕ ಸಾಧನೆಯಷ್ಟೆ ಮುಖ್ಯವಲ್ಲ. ಯಾಕೆಂದರೆ, ಹಿಂದಿನ ಶೈಕ್ಷಣಿಕ ಸಾಧನೆಯನ್ನಷ್ಟೇ ಲೆಕ್ಕ ಹಾಕಿ ಭವಿಷ್ಯವನ್ನು ಗ್ರಹಿಸಲಾಗದು' ಎಂದರು.

'ನಮಗೆ ಅವರ ದೃಷ್ಟಿಕೋನ, ಹೊಸತಿಗೆ ತೆರೆದುಕೊಳ್ಳುವ ಮನೋಭಾವ ಮತ್ತು ಪರಿಶ್ರಮದ ಮೇಲೆ ಇರಬಹುದಾದ ನಂಬಿಕೆ' ಒಂದು ಹಂತದಲ್ಲಿ ಮುಖ್ಯವೆನಿಸುತ್ತವೆ. ಮತ್ತೂಂದು ಹಂತದಲ್ಲಿ ಒಂದು ತಂಡದೊಳಗೆ ಸೇರಿ ಯಾವ ರೀತಿಯಲ್ಲಿ ಕೆಲಸ ಮಾಡಬಹುದೆಂಬುದೂ ಬಹಳ ಮುಖ್ಯ. ಇದನ್ನು ಆಧರಿಸಿಯೇ ನಮ್ಮ ಸಂದರ್ಶನ ಮತ್ತು ನೇಮಕಾತಿ ನಡೆಯುತ್ತದೆ ಎನ್ನುತ್ತಾರೆ ಅವರು.

ಹಾಗೆಂದರೇನು?
ಕಂಪೆನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಸಾಮಾನ್ಯವಾಗಿ ಕೇಳುವಂಥ ಪ್ರಶ್ನೆಗಳು ವಾಸ್ತವವಾಗಿ ಸಾಮಾನ್ಯವಾಗಿರುವುದಿಲ್ಲ. ನಾವು ಹಾಗೆ ಅಂದುಕೊಳ್ಳುತ್ತೇವಷ್ಟೇ. ಆ ಸಾಮಾನ್ಯ ಪ್ರಶ್ನೆಗಳ ಮೂಲಕ ನಿಮ್ಮ ಮನೋಭಾವವನ್ನು ಅಳೆಯುತ್ತಿರುತ್ತಾರೆ. ಉದಾಹರಣೆಗೆ ಸಂದರ್ಶನಕಾರರೊಬ್ಬರು, 'ನಿಮ್ಮ ಅತ್ಯಂತ ಆಪ್ತ ಗೆಳೆಯನ ಹೆಸರು ಹೇಳಿ. ಅವನಲ್ಲಿ ನಿಮ್ಮ ಸಾಮರ್ಥ್ಯ ಮತ್ತು ಒಳ್ಳೆಯ ಗುಣಗಳ ಬಗ್ಗೆ ಕೇಳುತ್ತೇನೆ' ಎನ್ನುತ್ತಾರೆ. ತತ್‌ಕ್ಷಣ ವಿದ್ಯಾರ್ಥಿ (ಸಂದರ್ಶನಾರ್ಥಿ), 'ಅಂಥ ಗೆಳೆಯರು ನನಗಿಲ್ಲ ಎಂದಾಗಲೀ ನಾನು ಮೂಲತಃ ಇನ್ನೊಬ್ಬರ ತಂಟೆಗೆ ಹೋಗುವವನಲ್ಲ' ಎಂದು ವಿನಯದ ಉತ್ತರ ಕೊಡುತ್ತಾರೆ. ನಿಮ್ಮ ಉತ್ತರವನ್ನು ಸಂದರ್ಶನಕಾರರು ಹೇಗೆ ವಿಶ್ಲೇಷಿಸುತ್ತಾರೆಂದರೆ, 'ನೀವೊಬ್ಬರು ಸಂಘಜೀವಿಯಲ್ಲ; ತಂಡದೊಳಗೆ ಕೆಲಸ ಮಾಡಲು ಕಷ್ಟ. ವೈಯಕ್ತಿಕವಾಗಿ ನಿಮ್ಮಷ್ಟಕ್ಕೆ ನೀವು ಕೆಲಸ ಮಾಡಬಲ್ಲಿರಿ. ಬಹಳ ಅತ್ಯುತ್ತಮವಾಗಿಯೇ ಸಾಧನೆ ಮಾಡಬಲ್ಲಿರಿ. ಆದರೆ ತಂಡದ ಇತರ ಸದಸ್ಯರೊಂದಿಗೆ ಬೆರೆತು ಕೆಲಸ ಮಾಡಲಾರಿರಿ' ಎಂಬುದು.

ಮತ್ತೂಂದು ಇಂಥದ್ದೇ ಪ್ರಶ್ನೆ. 'ನಿಮ್ಮ ಹವ್ಯಾಸಗಳೇನು?' ಎಂದು ಕೇಳಿದಾಗ ಬಹಳಷ್ಟು ಮಂದಿ, 'ನನಗೆ ಬಿಡುವು ಇದ್ದಾಗಲೆಲ್ಲ ಚೆಸ್‌ ಆಡುತ್ತೇನೆ. ಬ್ಯಾಡ್ಮಿಂಟನ್‌ ಬಹಳ ಇಷ್ಟ' ಎನ್ನುತ್ತಾರೆ. ಅದೂ ಸಹ ನಿಮ್ಮ ವೈಯಕ್ತಿಕ ನೆಲೆಯನ್ನಷ್ಟೆ ಹೇಳುತ್ತದೆ. ತಂಡದ ಸದಸ್ಯನಾಗಿಯಲ್ಲ. ಇಲ್ಲೂ ಚೆಸ್‌ ಬುದ್ಧಿವಂತರ ಆಟವಿರಬಹುದು; ಆದರೆ ತಂಡ ಸ್ಫೂರ್ತಿಯ ಆಟವಲ್ಲ. ಕ್ರಿಕೆಟ್‌, ಫ‌ುಟ್‌ಬಾಲ್‌ ಹಾಗಲ್ಲ. ಎಲ್ಲರೂ ಸೇರಿ ಒಂದು ಗೆಲುವಿಗೆ ಶ್ರಮಿಸುತ್ತಾರೆ.

ಹಾಗಾದರೆ ಕಂಪೆನಿಗಳು ಏನನ್ನು ಬಯಸುತ್ತವೆ?
ಕಂಪೆನಿಗಳು ಸದಾ ನೋಡುವುದು ಈ ಕ್ಷಣದ ಅಗತ್ಯವನ್ನಲ್ಲ. ಭವಿಷ್ಯದ ಆಶೋತ್ತರಗಳನ್ನು ಈಡೇರಿಸಲು ಅವರಿಗೆ ಶಕ್ತರು ಬೇಕು. ಹಾಗಾಗಿ, ಕ್ಯಾಂಪಸ್‌ ನೇಮಕಾತಿ, ಉದ್ಯೋಗ ಮೇಳದಲ್ಲಿ ಮೊಳಕೆಯೊಡೆದು, ಟಿಸಿಲಾಗಿ ಬೆಳೆಯಬಲ್ಲರೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಾರೆ. ನಿಮ್ಮ ಹೊಸತಿಗೆ ತೆರೆದುಕೊಳ್ಳುವ ಗುಣ, ಬದಲಾವಣೆಯನ್ನು ಸ್ವೀಕರಿಸುವ ಮನೋಭಾವ, ಪರಿಸ್ಥಿತಿಯನ್ನು ಒಪ್ಪಿಕೊಂಡು ಅದಕ್ಕೆ ಪರಿಹಾರ ಕಂಡುಹಿಡಿಯುವ ಉತ್ಸಾಹ-ಇವೆಲ್ಲವೂ ಬಹಳ ಮುಖ್ಯವಾಗಿ ಪರಿಗಣಿಸಲ್ಪಡುವಂಥವು.

ಹಾಗಾಗಿಯೇ ಇಂಥ ಸಂದರ್ಭಗಳಲ್ಲಿ ನಮ್ಮನ್ನು ನಾವು ವೈಯಕ್ತಿಕ ಸಾಧಕನೆಂದು ಬಿಂಬಿಸಿಕೊಳ್ಳುವುದಕ್ಕಿಂತ ಎಲ್ಲರೊಂದಿಗೆ ಕೂಡಿಕೊಂಡು ಕೆಲಸ ಮಾಡಬಲ್ಲ ಒಬ್ಬ ಸಮರ್ಥನೆಂದು ಬಿಂಬಿಸಿಕೊಂಡರೆ ಹೆಚ್ಚು ಲಾಭ. ಅದಕ್ಕೇ ಕವಿ ಡಿ.ವಿ. ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ, 'ಎಲ್ಲರೊಳು ಒಂದಾಗು ಮಂಕುತಿಮ್ಮ' ಎಂದದ್ದು. ಇದೇ ಇಂದಿನ ಮ್ಯಾನೇಜ್‌ಮೆಂಟ್‌ ಸಿದ್ಧಾಂತದ ಪರಮ ತತ್ವ. ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ನಮ್ಮನ್ನು ನಾವು ಬಂಧಿಸಿಕೊಂಡು ಬಿಟ್ಟರೆ, ನಮ್ಮೊಳಗೆ ಇರಬಹುದಾದ ಅಪರಿಮಿತ ಸಾಧ್ಯತೆಯೂ ಕ್ಷೀಣಿಸಬಹುದು. ಅದಕ್ಕೇ ಸ್ವಾಮಿ ವಿವೇಕಾನಂದರು ಹೇಳಿದಂತೆ, 'ನೀವು ಅಸಾಮಾನ್ಯರು, ಸಾಮಾನ್ಯರೆಂದುಕೊಳ್ಳಬೇಡಿ'.

ಯಾವುದಕ್ಕೂ ಆಗದು ಎನ್ನಬೇಡಿ
ಇವೆಲ್ಲವೂ ಒಂದು ದಿನದಲ್ಲಿ ಆಗುವುದೇ ಎಂಬುದು ಪ್ರಶ್ನೆ. ಅದಕ್ಕೆ ಉತ್ತರವಾಗಿಯೇ ಈ ಲೇಖನ. ಪದವಿಗೆ ಸೇರಿದ್ದೀರೆನ್ನಿ ಅಥವಾ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದುಕೊಂಡಿರೆನ್ನಿ. ಆ ಮೊದಲ ದಿನದಿಂದಲೇ ನಿಮ್ಮಲ್ಲಿರುವ ಗುಣಾವಗುಣಗಳನ್ನು ಅಭ್ಯಾಸ ಮಾಡಿ ಕೊಳ್ಳಬೇಕು. ಒಂದು ತಂಡದೊಳಗೆ ಸೇರಿ ಕೆಲಸ ಮಾಡ ಬಲ್ಲಂಥ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಬಗ್ಗೆ, ಆಶಾ ವಾದಿ ಮನೋಭಾವವನ್ನು ಬೆಳೆಸಿಕೊಳ್ಳುವ ಬಗ್ಗೆ, ಫ‌ಲಿತಾಂಶಗಳನ್ನು ತೂಗಿ ಅಳೆಯುತ್ತಾ ಕುಳಿತುಕೊಳ್ಳದೇ ಪ್ರಯತ್ನಗಳಿಗೆ ಮುಂದಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇದು ಸಣ್ಣವರಿರುವಾಗಲೇ ಆರಂಭಿಸಿದರೆ ಒಳಿತು. ಒಂದು ವೇಳೆ ಸಾಧ್ಯವಾಗಲಿಲ್ಲವೆನ್ನಿ. ಪಿಯುಸಿಯಲ್ಲಿ  ನಿಮ್ಮನ್ನು ನೀವು ತಿದ್ದಿಕೊಳ್ಳಿ. ವಿಶಾಲ ಜಗತ್ತಿಗೆ ಹೋಗುವುದಕ್ಕೆ ಹೇಗೆ ಪೂರಕವೂ ಹಾಗೆ ತಿದ್ದಿತೀಡಿಕೊಳ್ಳಿ. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅವೆಲ್ಲದಕ್ಕೂ ಅಂತಿಮ ಸ್ಪರ್ಶ ಕೊಡುತ್ತಾ ಹೋಗಿ. ಈ ಪ್ರಯತ್ನಗಳೆಲ್ಲವೂ ನಿಮ್ಮನ್ನು ಒಬ್ಬ ಆತ್ಮವಿಶ್ವಾಸವುಳ್ಳ ಸಮರ್ಥ ಸಂಪನ್ಮೂಲ ವ್ಯಕ್ತಿಯಂತೆ ಬಿಂಬಿಸಬಲ್ಲದು.

ಯಾವುದೇ ಸ್ಪರ್ಧೆ ಇದ್ದರೂ ಅದಕ್ಕೆ ಇಲ್ಲ ಎನ್ನಬೇಡಿ. ಎಲ್ಲ ಚಟುವಟಿಕೆಯ ಭಾಗವಾಗಿ. ತಂಡ ಸ್ಫೂರ್ತಿ ತುಂಬುವ ಕ್ರೀಡೆ, ಚಟುವಟಿಕೆಗಳಿಗೆ ಮೊದಲು ಹೆಸರು ನೋಂದಾಯಿಸಿಕೊಳ್ಳಿ. ಸೃಜನಶೀಲ ಚಟುವಟಿಕೆಗಳಿಗೆ ಸದಾ ಮುಂದಿರಿ. ಪ್ರತಿ ಪ್ರಯತ್ನದಲ್ಲೂ ಕಲಿಕೆಯನ್ನು ಹುಡುಕಿಕೊಳ್ಳಿ. ಅನುಭವ ದೊಡ್ಡದು. ಅದಕ್ಕಾಗಿ ಅವಕಾಶಗಳನ್ನು ತಪ್ಪಿಸಿಕೊಳ್ಳಬೇಡಿ. ವ್ಯಕ್ತಿಗಳನ್ನು ಮುಖಾ ಮುಖೀಯಾಗುವ ಅವಕಾಶಗಳಿಗೆ ಸದಾ ಸಿದ್ಧರಿರಿ. ನಮ್ಮನ್ನು ಒಬ್ಬ ವ್ಯಕ್ತಿಯನ್ನಾಗಿ ಶಿಕ್ಷಣ ರೂಪಿಸಬಹುದು; ಆದರೆ ಶಕ್ತಿಯನ್ನಾಗಿ ರೂಪಿಸುವುದು ಸಮಾಜ.

- ರಘೋತ್ತಮ, ಪುತ್ತೂರು

No comments:

Post a Comment