Friday 23 March 2018

ಸೇನೆ ಸೇರಲು ಬಯಸುವ ಯುವಕರಿಗೆ ಸುವರ್ಣಾವಕಾಶ

*ಸೇನೆ ಸೇರಲು ಬಯಸುವ ಯುವಕರಿಗೆ ಸುವರ್ಣಾವಕಾಶ*

*ಮಂಗಳೂರು:* ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಮಾರ್ಚ್‌ 12ರಿಂದ ಎಪ್ರಿಲ್ 25ರೊಳಗೆ www.indianarmy.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

*ಮೇ 12ರಿಂದ ರ‍್ಯಾಲಿ ಆರಂಭ:*

ಸೇನಾ ನೇಮಕಾತಿ ಮುಖ್ಯ ಕಾರ್ಯಾಲಯ ಕಚೇರಿ ಆಯೋಜಿಸಿರುವ ಸೇನಾ ನೇಮಕಾತಿ ರ‍್ಯಾಲಿಯು ಇಲ್ಲಿನ ಸೈನಿಕ ಶಾಲೆಯಲ್ಲಿ ಮೇ-12 ರಿಂದ 18ರವರೆಗೆ ನಡೆಯಲಿದೆ. ದಕ್ಷಿಣ ಕನ್ನಡದಿಂದ ಕೂಡ ಹೆಚ್ಚಿನ ಯುವಕರು ಪಾಲ್ಗೊಳ್ಳಬೇಕು. ಕೂಳೂರಿನಲ್ಲಿ ಸೈನಿಕ ಶಾಲೆ ಇದ್ದು, ಇಲ್ಲಿ ಅಗತ್ಯ ಮಾಹಿತಿ ದೊರೆಯಲಿದೆ. ಈ ಭಾಗದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೋಂದೆಲ್‌ನಲ್ಲಿ ಲಿಖಿತ ಪರೀಕ್ಷೆ ಆಯೋಜಿಸಲಾಗುವುದು ಎಂದು ಭಾರತೀಯ ಸೇನಾ ನೇಮಕಾತಿಯ ಕರ್ನಾಟಕ ರಾಜ್ಯ ಅಧಿಕಾರಿ ಪ್ರಶಾಂತ್ ಪೇಡ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾತ್ರ ರ‍್ಯಾಲಿಯಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಆನ್‌ಲೈನ್‌ ಮೂಲಕ ಮೇ 1ರ ನಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿಗದಿಪಡಿಸಿದ ಅಂಕದೊಂದಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತೇರ್ಗಡೆಯಾದ ಅಭ್ಯರ್ಥಿಗಳು ಭಾಗವಹಿಸಲು ಅರ್ಹರು ಎಂದು ತಿಳಿಸಿದರು.

*ಹುದ್ದೆಗಳ ವಿವರ:*

ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರಕನ್ನಡ, ದ.ಕ., ಉಡುಪಿ ಸೇರಿದಂತೆ ರಾಜ್ಯದ 11 ಜಿಲ್ಲಾ ಸೈನಿಕ ಶಾಲೆಗಳ ಮೂಲಕ ನೇಮಕಾತಿ ನಡೆಯುತ್ತಿದೆ. ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್(ಕ್ಲರ್ಕ್‌, ಸ್ಟೋರ್ ಕೀಪರ್) ಸೋಲ್ಜರ್ ಕುಶಲಕರ್ಮಿ, ಸೋಲ್ಜರ್ ತಾಂತ್ರಿಕ ಮತ್ತು ಸೋಲ್ಜರ್‌ ನರ್ಸಿಂಗ್‌ ಸಹಾಯಕ ಹೀಗೆ ವಿವಿಧ ಹುದ್ದೆಗಳು ಇರಲಿವೆ ಎಂದು ವಿವರಿಸಿದರು.

*ಹುದ್ದೆ ಮತ್ತು ವಿದ್ಯಾರ್ಹತೆ ವಿವರ*

ಸಿಪಾಯಿ ಜಿ. ಡಿ. ಹುದ್ದೆಗೆ - ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿರವೇಕು. ಶೇ.45 ಅಂಕಗಳೊಂದಿಗೆ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕ ಪಡೆದಿರಬೇಕು.
ಹದಿನೇಳುವರೆಯಿಂದ 21 ವಯಸ್ಸಿನೊಳಗಿರಬೇಕು. ಸಿಪಾಯಿ ಕ್ಲರ್ಕ್‌, ಎಸ್ಕೆಟಿ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಅವಶ್ಯವಿದ್ದು ಶೇ.50 ಅಂಕಗಳನ್ನು ಪಡಿದಿರಬೇಕು. ಹದಿನೇಳುವರೆಯಿಂದ 23 ವಯಸ್ಸಿನೊಳಗಿರಬೇಕು. ಸಿಪಾಯಿ ಟೆಕ್ನಿಕಲ್ ಮತ್ತು ಸಿಪಾಯಿ ನರ್ಸಿಂಗ್‌ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ ತೇರ್ಗಡೆಯಾಗಿರಬೇಕು ಮತ್ತು ಹದಿನೇಳುವರೆಯಿಂದ 23 ವಯಸ್ಸಿನೊಳಗಿನವರಾಗಿರಬೇಕು. ಸಿಪಾಯಿ ಟ್ರೇಡ್ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು ಮತ್ತು ಹದಿನೇಳುವರೆಯಿಂದ 23 ವಯಸ್ಸಿನೊಳಗಿನವರಾಗಿರಬೇಕು ಎಂದು ವಿವರಿಸಿದರು.

*ದೈಹಿಕ ಪರೀಕ್ಷೆ:*

ಆರಂಭದಲ್ಲಿ ಶಾರೀರಿಕ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಯು 5ನಿಮಿಷ 30 ಸೆಕೆಂಡಿನಲ್ಲಿ 1.6ಕಿಮೀ. ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿರಬೇಕು. 166 ಸೆಂಟಿಮೀಟರ್ ಎತ್ತರ, ಕನಿಷ್ಠ 50 ಕೆಜಿ ತೂಕ ಇತ್ಯಾದಿ ಅರ್ಹತೆಯೂ ಅವಶ್ಯ. ವೈದ್ಯಕೀಯ ಪರೀಕ್ಷೆ ಬಳಿಕ ಸಾಮಾನ್ಯ ವಿಷಯಕ್ಕೆ ಸಂಬಂಧಿಸಿ ಲಿಖಿತ ಪರೀಕ್ಷೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಪ್ರಶಾಂತ್ ವಿವರಿಸಿದರು.

No comments:

Post a Comment